Muhammad Hussain

ನನ್ನ ಬಗ್ಗೆ ನಾನು ಹೇಳುವುದು ನನ್ನ ಬಗೆಗಿರುವ ಕಲ್ಪನೆಗಳಾಗಿರಬಹುದೇ ಹೊರತು ನಾನೆಂಬ ಅಸ್ಮಿತೆಯನ್ನು ಸಂಪೂರ್ಣವಾಗಿ ಕಟ್ಟಿಕೊಡಲಾಗದು ಎಂದು ನಂಬಿದ್ದೇನೆ.. ಬದಲಾಗಿ ನನ್ನ ಬಗ್ಗೆ ಬೇರೆಯೊಬ್ಬರು ಹೇಳಿದ್ದರೆ ಅದಕ್ಕೊಂದು ಕನಿಷ್ಠ ಅರ್ಥವ್ಯಾಪ್ತಿಯಿದೆ.

ಆ ಕಾರಣದಿಂದಲೇ ನನ್ನ ಬಗ್ಗೆ ನನ್ನೊಡನಾಡಿಯೊಬ್ಬರು ಹೇಳಿದ ಈ ಮಾತುಗಳ ಮೂಲಕ ನನ್ನನ್ನು ನಿಮಗೆ ಪರಿಚಯಿಸುತ್ತಿದ್ದೇನೆ....

------------

ಹುಸೇನೀ.....

ನೀನು ನೀನಾಗಿರು...

ಭಾಷೆ, ಭಾವ, ಬರಹ ದೊಂದಿಗಿನ ನಿನ್ನ ಅವಿನಾಭವ ನಂಟು ಬೆರಗುಗೊಳಿಸುವಂತಹದ್ದು..

ಅವುಗಳನ್ನು ನಿನ್ನುಸಿರಂತೆ ಕಾಪಿಟ್ಟ ಮುಗ್ಧ ಹೃದಯ ನಿನ್ನದು.

ಕೊಟ್ಟುಕೊಳ್ಳುವ ಸ್ವಾರ್ಥತೆಗೆ ಇಲ್ಲಿ ಜಾಗವೇ ಇಲ್ಲ, ಎಡವಿದಾಗಲೆಲ್ಲಾ ಆತ್ಮಾವಲೋಕನ ಮಾಡಿ ತಿದ್ದಿಕೊಳ್ಲುವ ನಿನ್ನಾಂತರ್ಯಕ್ಕೆ ಬಹುಶಃ ಮಾರುಹೋಗದವರ್ಯಾರೂ ಇರಲಾರರು.

ಚಹರೆಗೂ ಬರಹಕ್ಕೂ ನಿಕಟ ಹೋಲಿಕೆ ಕೊಡುವಷ್ಟು ಪಾರದರ್ಶಕತೆ ಅಪರೂಪವೇ, ನಿನ್ನಲ್ಲಿನ ಆ ಪಾರದರ್ಶಕತೆಯನ್ನು ಕಾಪಿಡು, ಆಪ್ತರಿಗೆ ಆಪ್ತನಾಗಿ, ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ಎಲ್ಲರಲ್ಲೂ ಎಲ್ಲರಾಗಿ ಹಂಚಿಹೋದ ನಿನ್ನಲ್ಲಿರುವ 'ನೀನು' ಜೀವಂತನಾಗಿರಲಿ.. ಅಕ್ಷರದೊಂದಿಗಿನ ಆಳನಂಟು ನವುರಾಗಿ, ಹಸನಾಗಿ, ಹಸುರಾಗಿದ್ದಾಗಲೇ ನೀ ಬದುಕುತ್ತೀಯ.... ಬದುಕಬೇಕು... ಆ ಬದುಕು ನಿಶ್ಕಲ್ಮಷ, ಅದು ಬಿರುನುಡಿಗಳ, ಇರಿಯುವ ನೋಟಗಳ, ಕಳಚಲಾರದ ಕಗ್ಗಂಟುಗಳ ಉಸಿರುಗಟ್ಟಿಸುವ ಹಂಗಿನ ಬದುಕಲ್ಲ... ಈ ಎಲ್ಲವನ್ನೂ ಭುವಿಯಲ್ಲೇ ಕಳಚಿಟ್ಟು, ಬಾನು ನಿಚ್ಚಳವಾದಷ್ಟೂ ದೂರ ಬಲು ದೂರಕ್ಕೆ ಸ್ವಾತಂತ್ರ್ಯದ ರೆಕ್ಕೆ ಕಟ್ಟಿ ಹಾರಿ ಬೆಳ್ಳಿ ಮೋಡಗಳೊಂದಿಗೆ ಸರಸವಾಡಿ ನಕ್ಕು ನಲಿವ 'ಪುಟ್ಟ' ಬಿಳಿ ಪಾರಿಜಾತವಾಗಬೇಕು.. ಜೀವನದ 'ಕಳೆ'ಗಳಿಗೆ ಎದೆಗುಂದದೇ, ಹೀಗೇ ನೀನಾಗಿ, ನಿಜವಾದ ನೀನಾಗಿ... ಆಗಲೇ ನೀನು ನೀನಾದಾಗಲೇ ಬದುಕಿಗೊಂದು ಬೆಲೆ... :)

------------

ಮನದ ಮೂಲೆಯಲ್ಲಿ ಹೂತಿಟ್ಟ ಭಾವನೆಗಳಿಗೆ ಅಕ್ಷರ ಮೂಲಕ ತೇಪೆ ಹಚ್ಚುವ ಪುಟ್ಟ ಪ್ರಯತ್ನವಿದು. ನಿಮ್ಮ ಮೆಚ್ಚುಗೆ ಮತ್ತು ಹಾರೈಕೆ ಇರಲಿ. ಇಷ್ಟವಾದರೆ ಮಾತಲ್ಲೇ ಮೆಚ್ಚಿ, ಆಗದಿದ್ರೆ ಮಾತಲ್ಲೇ ಚುಚ್ಚಿ… ಅವೆರಡಕ್ಕೂ ಸದಾ ಸ್ವಾಗತ.

ಸದಾ ನಿಮ್ಮವನೇ,

ಹುಸೇನಿ ~